Monday, August 6, 2007

ಬಸವನ ಮೂರ್ತಿಯೇ ಎನ್ನ ಧ್ಯಾನಕ್ಕೆ ಮೂಲ


''ಬಸವನ ಮೂರ್ತಿಯೇ ಎನ್ನ ಧ್ಯಾನಕ್ಕೆ ಮೂಲ, ಬಸವನ ಕೀರ್ತಿಯೇ ಎನ್ನ ಜ್ಞಾನಕ್ಕೆ ಮೂಲ
ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ''
ಎಂದು ಸೊನ್ನಲಿಗೆ ಸಿದ್ಧರಾಮೇಶ್ವರರು ಗುರು ಬಸವಣ್ಣನವರ ಬಗ್ಗೆ ಮನಸಾರೆ ಹಾಡಿಹೊಗಳಿ ಅವರ ವ್ಯಕ್ತಿತ್ವವನ್ನು ಲೋಕಕ್ಕೆ ಪರಿಚಯಿಸಿಕೊಟ್ಟಿದ್ದಾರೆ.

Monday, May 21, 2007

ವಚನಗಳು

1) ಬಸವಾ ಬಸವಾ ಎಂದರೆ ಪಾಪ ದೆಸೆಗೆಟ್ಟು ಹೋಗುವುದು ಬಸವನ ಪಾದವ ನಂಬಿದ ಭಕ್ತರು ಹಸನಾದರಯ್ಯ ಸರ್ವಜ್ಞ.



2) ಕೆರೆ ಹಳ್ಳಗಳು ಮೈದೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು, ವಾರಿಧಿ ಮೈದೆಗೆದರೆ ಮುತ್ತು ರತ್ನಂಗಳ ಕಾಣಬಹುದು, ನಮ್ಮ ಲಿಂಗದೇವನ ಶರಣರು ಮೈದೆಗೆದು ಮಾತನಾಡಿದರೆ ಅಲ್ಲಿ ಲಿಂಗವೇ ಕಾಣಬಹುದು.



3) ಬಸವನ ಮೂರ್ತಿಯೇ ಎನ್ನ ಧ್ಯಾನಕ್ಕೆ ಮೂಲ, ಬಸವನ ಕೀರ್ತಿಯೇ ಎನ್ನ ಜ್ಞಾನಕ್ಕೆ ಮೂಲ, ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ.



4) ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ, ಹಿರಿದಿಪ್ಪ ರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನೂಡಿಗಳ ಒಂದರಘಳಿಗೆ ಇತ್ತರೆ ನಿಮ್ಮನಿತ್ತೆ ಕಾಣಾ ರಾಮಾನಾಥ.



5) ಪ್ರಣವಾರೂಢನು ಪ್ರಣವ ಸ್ವರೂಪನು ಪ್ರಕೃತಿ ಸೌಂಜ್ಞನು ಷಢಂಗ ಸಮರಸ ನಮ್ಮ ಲಿಂಗದೇವರು.

Friday, January 5, 2007

ಕಲ್ಯಾಣಕಿರಣ ಹೊತ್ತಿಸಲಿ ಬಾಳಿನ ಆಶಾಕಿರಣ

"ಬಸವಾ ಬಸವಾ ಎಂದಡೆ ಪಾಪ ದೆಸೆಗೆಟ್ಟು ಹೋಗುವುದು ಬಸವನ ಪಾದವ ನಂಬಿದ ಭಕ್ತರು ಹಸನಾದರಯ್ಯ ಸರ್ವಜ್ಞ".ಎಂದು ಸರ್ವಜ್ಞ ಹಾಡಿ ಹೊಗಳಿರುವಂತೆ ಗುರುಬಸವಣ್ಣನವರು 12ನೇಯ ಶತಮಾನ ಕಂಡ ಮಹಾ ಮಾನವತಾವಾದಿ.


ಬ್ರೀಟಿಷ ತತ್ವಜ್ಞಾನಿ ಆರ್ಥರ್ ಮೈಲ್ಸ್ "WHAT EVER THE LEGEND MAY SAY ABOUT LORD BASAVA THE FACT IS FULLY CLEAR THAT HE IS THE FIRST FREE THINKER OF THE INDIA AND ANUBHAV MANTAP IS THE FIRST PARLIMENT IN THE WORLD" ಎಂದು ಹೇಳಿದಂತೆ "ಭಾರತದ ದಂತ ಕಥೆಗಳು ಗುರು ಬಸವಣ್ಣನವರ ಬಗ್ಗೆ ಏನೇ ಹೇಳಲಿ ಅವರೊಬ್ಬ ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ ಮತ್ತು ಅನುಭವ ಮಂಟಪ ಭಾರತದ ಮೊದಲ ಸಂಸತ್ತು" ಎಂದು ಹೇಳಿರುವಂತೆ ನೊಂದ ಜನರ ಆಶಾಕಿರಣವಾಗಿ, ಸಮಾಜದಲ್ಲಿ ಆಳವಾಗಿ ಬೇರುರಿದ್ದ ಕಂದಾಚಾರ, ಮೂಡಾಚಾರವನ್ನು ಬೇರುಸಮೇತ ಕಿತ್ತು ಹಾಕಿ, ಕಾಯಕ ಪ್ರಜ್ಞೆ ಮತ್ತು ದಾಸೋಹದ ಕುರಿತು ಹೊಸ ಪ್ರಯೋಗ ಮಾಡುವುದರೊಂದಿಗೆ ಜಗತ್ತಿಗೆ ಆದರ್ಶರಾದ ಜಾಗತೀಕ ಪುರುಷ-ಶ್ರೀ ಬಸವೇಶ್ವರರು.

ಅಂತಹ ಮಹಾಮಹಿಮರು ನೀಡಿರುವ ಜಾಗತೀಕ ಧರ್ಮವನ್ನು, ತತ್ವಗಳನ್ನು ಇಂದು ನಾವುಗಳು ಆಚರಿಸಿ ಉಪದೇಶಿಸುವ ಮಹತ್ತರ ಕಾರ್ಯ ಮಾಡಬೇಕಿದೆ.ಇಂದು ವಿದೇಶಗಳಲ್ಲಿ ಮತ್ತು ಭಾರತದ ಪ್ರಮುಖ ನಗರಗಳಲ್ಲಿ ನಾವುಗಳು ಸಾವಿರಾರು ರೂಪಾಯಿಗಳನ್ನು ತೆತ್ತು ವ್ಯಕ್ತಿತ್ವ ವಿಕಸನ ತರಬೇತಿ ಪಡೆಯುತ್ತಿದ್ದವೆಲ್ಲ, ಆ ಎಲ್ಲ ತತ್ವಗಳನ್ನು, ಬದುಕಿನ ವ್ಯಕ್ತಿತ್ವ ನಿರ್ಮಾಣಕ್ಕೆ ಗುರುಬಸವಣ್ಣನವರು ಹನ್ನೆರಡನೇಯ ಶತಮಾನದಲ್ಲಿಯೆ ನೀಡಿ ಹೋಗಿದ್ದಾರೆ, ಅಂತಹ ಮಹಾ ಮಹಿಮರ ಜೀವನಾದರ್ಶಗಳ ಕುರಿತು, ವೈಚಾರಿಕ, ವಾಸ್ತವಿಕ ನೆಲೆಗಟ್ಟಿನ ಮೇಲೆ ಮೂಡಿ ಬರುತ್ತಿರುವ, ಪೂಜ್ಯ ಮಾತಾಜಿಯವರ ನೆತ್ರತ್ವದಲ್ಲಿ , ಭವಿಷ್ಯಕ್ಕೆ ಆಶಾ ಜ್ಯೋತಿಯನ್ನು ಹೊತ್ತಿಸುತ್ತಾ ಮುನ್ನಡೆದಿರುವ ಪತ್ರಿಕೆಯೆ ಕಲ್ಯಾಣ ಕಿರಣ.

ಗುರು ಬಸವಣ್ಣನವರ ಮತ್ತು ಬಸಾವಾದಿ ಶರಣರ ತತ್ವಗಳನ್ನು ಜಗತ್ತಿಗೆ ತಿಳಿಸಿಕೊಡುವ ಮಹೊನ್ನತ ಉದ್ದೇಶದಿಂದ ಕೂಡಲ ಸಂಗಮ ಬಸವ ಧರ್ಮ ಪೀಠದ ಪ್ರಪ್ರಥಮ ಪೀಠಾಧೀಶರಾದ ಲಿಂಗೈಕ್ಯ ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಜ್ಞಾನಗರ್ಭದಲ್ಲಿ 1970ರಲ್ಲಿ ಉದಯಿಸಿದ ಈ ಪತ್ರಿಕೆ ಇಂದಿಗೂ ಸಾವಿರಾರೂ ಓದುಗರನ್ನು ದೇಶ ವಿದೇಶಗಳಲ್ಲಿ ಹೊಂದಿದೆ. ಸತತ ಮೂವತ್ತು ವರ್ಷಗಳಿಂದ ಅವ್ಯಾಹತವಾಗಿ ನಾಡಿನ ಬಸವ ಭಕ್ತರಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮದ ದೀಪ್ತಿಯನ್ನು ಹಚ್ಚುತ್ತಾ ಮುನ್ನಡೆದಿರುವ ಕಲ್ಯಾಣ ಕಿರಣ ಅದೆಷ್ಟೋ ಜನತೆಯ ಬಾಳಿನ ಹೊಂಗಿರಣವಾಗಿ ಬೆಳಗಿದೆ, ಬೆಳೆಸಿದೆ.

ಇನ್ನೂ ಮುಂದೆ ನೀವು ಅಂತರಜಾಲದಲ್ಲಿಯೂ ಕಾಣಬಹುದು. ಪೂಜ್ಯ ಮಾತಾಜಿಯವರ ಹರಿತವಾದ ಲೇಖನಗಳು, ವಾಸ್ತವಿಕ ವಿಚಾರಧಾರೆಗಳು, ವೈಚಾರಿಕ ಮಾರ್ಗದರ್ಶನ, ಸಮಾಜದ ಬಗೆಗಿನ ಅವರ ಕಾಳಜಿ ಕುರಿತು ಲೇಖನಗಳು ಇರುತ್ತವೆ.

ಇಂದು ಗಣಕ ಯಂತ್ರದ ಮೂಲಕ ಜಗತ್ತು ಅಂಗೈಯಲ್ಲಿ ಅಡಗಿ ಕುಳಿತಿದೆ ಎನ್ನುವುದಕ್ಕೆ ಇಲ್ಲಿ ಮೂಡಿ ಬರುತ್ತಿರುವ ಈ ಪತ್ರಿಕೆಯೆ ಉತ್ತಮ ನಿದರ್ಶನ, ಒಂದು ಪತ್ರಿಕೆಯಾದರೆ ಆಯಾ ಪ್ರಾಂತ್ಯಗಳಿಗೆ ಮಾತ್ರ ಸಿಮಿತವಾಗಿರುತ್ತವೆ, ಆದರೆ ಈ ಬ್ಲಾಗ್ ಮೂಲಕ ಕರ್ನಾಟಕದಲ್ಲಷ್ಟೆ ಅಲ್ಲದೆ, ಜಗತ್ತಿನ ಯಾವುದೆ ಮೊಲೆಯಲ್ಲಿಯೂ ಸಹ ನಾವು ತೆರೆದು ನೋಡಬಹುದು. ಇಂತಹ ಒಂದು ಅದ್ಭುತ ತಂತ್ರಜ್ಞಾನವನ್ನು ನೀಡಿದ ಆ ಕ್ಷೇತ್ರದ ಮಹನಿಯರಿಗೆ ಅನಂತ ಶರ್ಣಾರ್ಥಿಗಳು.

Thursday, January 4, 2007

ಹನ್ನೆರಡನೇಯ ಶತಮಾನ ನೆನಪಿಸುವ ಶರಣಮೇಳ


ಪ್ರಭುಪ್ರಸಾದ ಬಿ.
(ಕೂಡಲ ಸಂಗಮದಲ್ಲಿ ಇದೇ ತಿಂಗಳು 11ರಿಂದ 15ನೇ ತಾರಿಖಿನವರೆಗೆ ಜರುಗಲಿರುವ ಇಪ್ಪತ್ತನೇಯ ಶರಣಮೇಳದ ನಿಮಿತ್ತ ಈ ಲೇಖನ )


'ಭಾರತದ ಪ್ರಪ್ರಥಮ ಸ್ವಾತಂತ್ರ ವಿಚಾರವಾದಿ' ಎಂದು ಬ್ರೀಟಿಷ ತತ್ವಜ್ಞಾನಿ ಆರ್ಥರ ಮೈಲ್ಸ್ ಹಾಡಿ ಹೊಗಳಿದ ವಿಶ್ವಗುರು ಮಹಾಮಾನವತಾವಾದಿ ಗುರು ಬಸವಣ್ಣನವರ ವಿದ್ಯಾಭೂಮಿ,ತಪೊಸ್ಥಾನ,ಐಕ್ಯ ಸ್ಥಾನವಾದ ಕೂಡಲಸಂಗಮದಲ್ಲಿ ಇದೆ ತಿಂಗಳು 11ರಿಂದ 15ರವರೆಗೆ ಐದು ದಿನಗಳ ಕಾಲ ವಿಜ್ರಂಭಣೆಯಿಂದ 20ನೇಯ ಶರಣಮೇಳ ಮತ್ತೋಮ್ಮೆ ಹನ್ನೆರಡನೇಯ ಶತಮಾನವನ್ನು ನೆನಪಿಸುವ ನಿಟ್ಟಿನಲ್ಲಿ ಜರುಗಲಿದೆ.

ಬಂದಿರುವ ಎಲ್ಲ ಭಕ್ತರು ಬಿಳಿ ಸಮವಸ್ತ್ರ ಧರಿಸಿ ಮೇಲೊಂದು ಕಾವಿಯ ಸ್ಕಾರ್ಪನ್ನು ಹಾಕಿಕೊಂಡು ತಮಗೆದುರಾದ ಎಲ್ಲರಿಗೂ ವಿಧೇಯರಾಗಿ ಶರಣು ಶರಣಾರ್ಥಿ ಎಂದು ಹೃದಯತುಂಬಿ ಹೇಳುತ್ತಿರುವಾಗ ನಾವು ನಿಜಕ್ಕೂ ಹನ್ನೆರಡನೇಯ ಶತಮಾನದಲ್ಲಿದ್ದೇವೆ ಎಂದು ಒಂದು ಕ್ಷಣ ಅನ್ನಿಸದೆ ಇರದು.ಅಂತಹ ಹನ್ನೆರಡನೇಯ ಶತಮಾನದ ನೆನಪನ್ನು ಮರಕಳಿಸುವಂತಹ ಅದ್ಬುತ ಶರಣ ಸಂಸ್ಕ್ಟತಿಯ ಉತ್ಸವವೇ ಈ ಶರಣಮೇಳ.
'ಪ್ರವಚನ ಪಿತಾಮಹ' ಎಂದೆ ನಾಡಿನ ಭಕ್ತ ಮಾನಸದಲ್ಲಿ ಬಿಂಬಿತವಾದ ಬಸವ ಧರ್ಮಪೀಠದ ಪ್ರಪ್ರಥಮ ಪೀಠಾಧೀಶರಾದ ಪೂಜ್ಯ ಶ್ರೀ ಲಿಂಗೈಕ್ಯ ಲಿಂಗಾನಂದ ಮಹಾ ಸ್ವಾಮೀಜಿಯವರ ಹಾಗೂ ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು,ಕ್ರಾಂತಿಕಾರಿ ವಿಚಾರವಾಧಿಗಳು,'ಮಾತಾಜಿ' ಎಂದೆ ಭಕ್ತ ಸಮೂಹದಲ್ಲಿ ಬಿಂಬಿಸಲ್ಪಡುವ ಮಾತೆ ಮಹಾದೇವಿಯವರ ದೂರದೃಷ್ಟಿಯ ಫಲವಾಗಿ 1988ರಲ್ಲಿ ಆರಂಭವಾದ ಪ್ರಥಮ ಶರಣಮೇಳ ಇಂದು ಇಪ್ಪತರ ಹರೆಯದ ಪ್ರವರ್ಧಮಾನಕ್ಕೆ ಕಾಲಿಟ್ಟಿದೆ.

ವರ್ಷಕ್ಕೊಮ್ಮೆ ಮೆಕ್ಕಾದಲ್ಲಿ ಮುಸ್ಲಿಂರು,ಜೆರುಸಲೆಂನಲ್ಲಿ ಕ್ರೈಸ್ತರು ಸೇರುವಂತೆ,ಜಾಗತೀಕ ಪುರುಷರಾದ ಗುರು ಬಸವಣ್ಣನವರು ಕೊಟ್ಟ ಲಿಂಗವಂತ ಧರ್ಮಿಯರು ಎಲ್ಲಿ ಸೇರಬೇಕು ಎನ್ನುವ ವಿಚಾರ ಹೊಳೆದಾಗ ಬಸವಣ್ಣನವರ ಭವಿಷ್ಯಕ್ಕೆ ದಾರಿದೀಪವಾಗಿದ್ದ ತಪೋಭೂಮಿ, ಐಕ್ಯಸ್ಥಾನವಾದ ಕೂಡಲಸಂಗಮವನ್ನು ಬಸವ ಧರ್ಮಿಯರ ಧಾರ್ಮಿಕ ಪವಿತ್ರ ಸ್ಥಳವೆಂದು ಘೋಷಿಸಿ ಅಲ್ಲಿಯೆ ವರ್ಷಕ್ಕೊಮ್ಮೆ ಬಸವ ಭಕ್ತರನ್ನು ಸೇರಿಸುವ ಇವರಿರ್ವ ಮಹನಿಯರು ಅಂದು ಹಾಕಿದ ಬಸವತತ್ವದ ಶರಣಮೇಳ ಎನ್ನುವ ಬೀಜ ಕೇವಲ ಇಪ್ಪತ್ತು ವರ್ಷಗಳಲ್ಲಿ ವಿದೇಶಗಳಿಂದ ಭಕ್ತರನ್ನು ಕೈಬಿಸಿ ಕರೆಯುವಂತಹ ಹೆಮ್ಮರವಾಗಿ ಬೆಳೆದಿದೆ ಎಂದರೆ ಇದು ಬಸವ ಭಕ್ತರಿಗಷ್ಟೆ ಅಲ್ಲ ಕನ್ನಡ ನಾಡಿಗೆ ನುಡಿಗೆ ಹೆಮ್ಮೆ ತರುವ ಸಂಗತಿ.

ಇಂದು ಕೂಡಲಸಂಗಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಎರಿಸಿರುವ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲರಿಗೆ ಸ್ಪೂರ್ತಿನಿಡಿದ್ದು ಪೂಜ್ಯ ಅಪ್ಪಾಜಿ ಮತ್ತು ಮಾತಾಜಿಯವರು ಇಲ್ಲಿ ನಿರ್ಮಿಸಿರುವ ಸುಂದರವಾದ ಶರಣಲೋಕ, ಬಸವ ಮಹಾಮನೆ,ಮಹಾಮಠವೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ,ಎಕೆಂದರೆ ಈ ಉಭಯ ಪೂಜ್ಯರು ಬಂದು ಸಂಗಮವನ್ನು ಶರಣಲೋಕವನ್ನಾಗಿ ಮಾಡದಿದ್ದರೆ ಇಂದಿಗೂ ಅದು ನಾಡಿನ ಪ್ರವಾಸಿ ತಾಣಗಳಲ್ಲಿ ಬಿಂಬಿತವಾಗುತ್ತಿದ್ದಿಲ್ಲ ಎಂಬುದು ನಾಡಿನ ಎಲ್ಲ ಬಸವಾಭಿಮಾನಿಗಳ ಅಭಿಮತವಾಗಿದೆ.
ಪ್ರತಿವರ್ಷ ಅಂದಾಜು ಆರವತ್ತು ಸಾವಿರಕ್ಕೂ ಹೆಚ್ಚು ಶರಣ-ಶರಣೆಯರು ಸಂಪೂರ್ಣ ಐದು ದಿನಗಳ ಕಾಲ ಜ್ಞಾನದಾಸೋಹ, ಅನ್ನದಾಸೋಹ ದಲ್ಲಿ ಪಾಲ್ಗೊಂಡು 'ರಕ್ತ ಸಂಭಂದಕ್ಕಿಂತ ಭಕ್ತಿ ಸಂಭಂದ ಮುಖ್ಯ' ಎಂಬುದನ್ನು ಅರಿತು ಒಂದಾಗಿ ಬೆರೆತು ಅನುಭವಿಸುವ ಆನಂದವನ್ನು ವರ್ಣಿಸಲಸಾಧ್ಯ.

ನಾಡಿನ ಮೂಲೆ ಮೂಲೆಗಳಿಂದಲ್ಲದೆ,ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ,ತಮಿಳುನಾಡು,ಮಹಾರಾಷ್ಟ್ರ,ಗೋವಾ,ದೇಹಲಿಗಳಿಂದ ಜೊತೆಗೆ ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸಹ ಈ ಶರಣಮೇಳದಲ್ಲಿ ಪಾಲ್ಗೊಂಡು ಐದು ದಿನಗಳ ಕಾಲ ತಮ್ಮ ತಮ್ಮ ಸಂತಸವನ್ನು,ತಮ್ಮ ಪ್ರದೇಶಗಳಲ್ಲಿ ಯಾವರೀತಿ ಶರಣ ತತ್ವ ಪ್ರಸಾರ ಮಾಡುತ್ತಿದ್ದಾರೆಂಬುದನ್ನು ಹಂಚಿಕೊಳ್ಳುವ ರೀತಿ ನಿಜಕ್ಕೂ ಸಂತಸ ನೀಡುತ್ತದೆ.

'ಕೂಡಲಸಂಗಮ ಶರಣಮೇಳ ಸಮೀಪ ಬಂದೈತಿ ಇಗಿಂದ ತಯಾರಾಗೊಣ' ಎಂದು ಶರಣ ಶರಣೆಯರು ತಯಾರಾಗಿ ಬಂದು ಹಣೆಯ ಮೇಲೇ ಮೂರುಬೊಟ್ಟು ವಿಭೂತಿ,ಕೊರಳಲ್ಲಿ ಇಷ್ಟಲಿಂಗ ಮತ್ತು ರುದ್ರಾಕ್ಷಿ ಧರಿಸಿ ಎದುರಿಗೆ ಬಂದವರಿಗೆ ಶರಣು ಶರಣಾರ್ಥಿ ಎನ್ನುವ ಇವರ ಶೈಲಿ ಎಂತಹ ನಾಸ್ತಿಕರನ್ನು ಒಂದು ಕ್ಷಣ ಆಸ್ತಿಕತೆಯೆಡೆಗೆ,ಆಧ್ಯಾತ್ಮಿಕತೆಯೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೆ ಇಲ್ಲ.

ಇನ್ನೂ ಐದು ದಿನದ ಕಾರ್ಯಕ್ರಮಗಳಾದರೂ ಅಂತಹವೆ,ಅರ್ಥಗರ್ಭಿತ ಆಧ್ಯತ್ಮಿಕ ಆಳವನ್ನೊಳಗೊಂಡ ವಿಚಾರಗೊಷ್ಠಿಗಳು,ಅನುಭಾವಿಗಳ ಅನುಭವದ ಕಥನಗಳು,ಪೂಜ್ಯ ಮಾತಾಜಿಯವರ ಹರಿತವಾದ ಪ್ರವಚನಗಳು,ನುರಿತ ವಿಷಯ ತಜ್ಞರ ಭಾಷಣಗಳು,ಪ್ರಸ್ತುತವಾಗಿ ನಾಡಿಗೆ ಕಾಡುತ್ತಿರುವ ಅನಿಷ್ಟ ಪದ್ದತಿಗಳು,ವಿವಾದದಲ್ಲಿರುವ ವಿಷಯಗಳ ಮೇಲೆ ಬೆಳಕು ಚೆಲ್ಲಿ ಬಸವತತ್ವದಿಂದ ಇಂತಹ ಸಮಸ್ಯೆಗಳನ್ನು ಬಸವ ತತ್ವದ ಆಧಾರದ ಮೇಲೆ ಹೇಗೆ ಹೋಗಲಾಡಿಸಬಹುದು ಎಂಬುದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶರಣಮೇಳ ಬೆಳಕು ಚೆಲ್ಲುತ್ತದೆ.

ಅಂದಾಜು 30ಲಕ್ಷ ರೂಪಾಯಿಗೂ ಹೆಚ್ಚೂ ವೆಚ್ಚದಲ್ಲಿ ನಡೆಯುವ ಈ ಶರಣಮೇಳಕ್ಕೆ ಸರಕಾರದಿಂದಾಗಲಿ,ಯಾವುದೆ ಸಂಘಸಂಸ್ಥೆಯಿಂದಾಗಲಿ ಧನ ಸಹಾಯ ಪಡೆಯದೆ ಬರಿ ಭಕ್ತಸಮೂಹದಿಂದ ಸಂಗ್ರಹಿಸಿದ ಹಣದಿಂದ ಮಾತ್ರ ನಡೆಯುತ್ತದೆ ಎಂಬುದು ಗಮನಾರ್ಹ,ಕೊಟ್ಯಾಂತರ ರೂಪಾಯಿ ವ್ಯಯಿಸಿದರು ಅಚ್ಚುಕಟ್ಟುತನದಲ್ಲಿ ಮತ್ತೆ ಮತ್ತೆ ಎಡವಟ್ಟುತನ ಮಾಡತ್ತಿರುವ ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ,ಸಾಹಿತ್ಯಸಮ್ಮೆಳನಗಳಿಗೆ ಶರಣಮೇಳ ಮಾದರಿಯಾಗಿ ನಿಲ್ಲಬಲ್ಲದು.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪ್ರತಿದಿನ ಕೋಳಿಮೊಟ್ಟೆ ನಿಡಲು ನಿರ್ಧರಿಸಿರುವ ವಿಷಯ,ಆಯಾ ಪ್ರಾಂತಿಯ ಬಸವ ಮಂಟಪಗಳಿಗೆ ಅಲ್ಲಿನ ಪ್ರಮುಖ ಶರಣರ ಹೆಸರನ್ನಿಡುವುದು ಸೇರಿದಂತೆ ಅನೇಕ ವಿಷಯಗಳು ಈ ಬಾರಿ ಶರಣಮೇಳದಲ್ಲಿ ಚರ್ಚಿತಗೊಳ್ಳಲಿವೆ,ಜೊತೆಗೆ ರಾಜ್ಯ,ರಾಷ್ಟ್ರಮಟ್ಟದ ಭರತನಾಟ್ಯ ಪಟುಗಳಿಂದ ಶರಣಸಂಸ್ಕ್ರತಿಯ ಮೇಲೆ ಬೆಳಕು ಚೆಲ್ಲುವ ಉತ್ತಮ ಕಾರ್ಯಕ್ರಮಗಳು ಸಹ ಐದು ದಿನದ ಶರಣಮೇಳಕ್ಕೆ ಮೆರಗುತರಲಿವೆ.